Saturday, November 20, 2010

ಡ್ರ್ಯಾಗನ್ ಗೂ ಹಬ್ಬಲಿ ಕನ್ನಡದ ಕಂಪು

ಗೆಳೆಯರೆ,
ಕೆಲವು ದಿನಗಳ ಹಿಂದೆ ಬ್ರಿಟಿಷ್ ಏರ್ವೇಸ್ ನಲ್ಲಿ ಕನ್ನಡದಲ್ಲಿ ಸೇವೆ ನೀಡಿದ್ದರ ಬಗ್ಗೆ ನನ್ನ ಬ್ಲಾಗ್ (http://sampada.net/article/26672) ನಲ್ಲಿ ಬರೆದಿದ್ದೆ.
ಕರ್ನಾಟಕದಿಂದ ಹೊರಡುವ ಹಾಗು ಕರ್ನಾಟಕಕ್ಕೆ ಬರುವ ಎಲ್ಲ ವಿಮಾನಗಳಲ್ಲಿ ಕನ್ನಡದಲ್ಲಿ ಪ್ರಕಟಣೆಯನ್ನು ಹೊರಡಿಸುವ ಪದ್ದತಿಯನ್ನು ಬ್ರಿಟಿಷ್ ಏರ್ವೇಸ್ ಈಗ ತಪ್ಪಿಲ್ಲದೇ ಪಾಲಿಸುತ್ತಿದೆ.
ಕಳೆದ ಬಾರಿ ನಾನು ಡ್ರ್ಯಾಗನ್ ಏರ್ವೇಸ್ ನಲ್ಲಿ ಬೆಂಗಳೂರಿನಿಂದ ಹಾಂಗ್ ಕಾಂಗ್ ಗೆ ಪ್ರಯಾಣ ಮಾಡಿದೆ. ಡ್ರ್ಯಾಗನ್ ಏರ್ವೇಸ್‍ನಲ್ಲಿ ಕನ್ನಡ ಪ್ರಕಟಣೆಗಳೂ ಇಲ್ಲ, ಮನರಂಜನೆಗಾಗಿ ಕನ್ನಡ ಚಿತ್ರಗಳೂ ಇಲ್ಲ.
ಕನ್ನಡದಲ್ಲಿ ಪ್ರಕಟಣೆಗಳಿದ್ದರೆ, ಕನ್ನಡ ಮಾತ್ರ ಬಲ್ಲ ಜನರಿಗೆ ವಿಮಾನದಲ್ಲಿ ಓಡಾಡುವುದು ಸಲೀಸಾಗುತ್ತದೆ. ಪ್ರಯಾಣದ ಸಮಯದಲ್ಲಿ ಕನ್ನಡ ಚಿತ್ರಗಳನ್ನು ನೋಡುವ ವ್ಯವಸ್ಥೆ ಇದ್ದರೆ, ಕನ್ನಡಿಗರು ತಮ್ಮ ಭಾಷೆಯ, ತಮಗಿಷ್ಟವಾದ ಚಿತ್ರಗಳನ್ನು ನೋಡುತ್ತಾ ಕಾಲ ಕಳೆಯಬಹುದು.
ಸರಿ, ಡ್ರ್ಯಾಗನ್ ಏರ್ವೇಸ್ ಸಂಸ್ಥೆಗೆ ಈ ವಿಷಯದ ಬಗ್ಗೆ ತಿಳಿಹೇಳೋಣ ಅಂತ ಅವರಿಗೆ ಒಂದು ಮಿಂಚೆ ಬರೆದದ್ದಾಯ್ತು.
"ಬೆಂಗಳೂರಿಂದ ಓಡಾಡುವ ನಿಮ್ಮ ವಿಮಾನಗಳಲ್ಲಿ ಸೇವೆಗಳನ್ನು ಕನ್ನಡದಲ್ಲಿ ನೀಡುವುದರಿಂದ ಕನ್ನಡಿಗ ಗ್ರಾಹಕರಿಗೆ ಬಹಳ ಉಪಯೋಗವಾಗುತ್ತದೆ. ವಿಮಾನದಲ್ಲಿ ಕನ್ನಡ ಚಲನಚಿತ್ರಗಳು, ಪತ್ರಿಕೆಗಳನ್ನೂ ನೀಡಿ" ಎಂದು ಹೇಳುತ್ತಾ ಬರೆದ ಮಿಂಚೆಗೆ ಅವರಿಂದ ಒಳ್ಳೆಯ ಪ್ರತಿಕ್ರಿಯೆ ಬಂತು..
ಮನವಿಯನ್ನು ಡ್ರ್ಯಾಗನ್ ಏರ್ವೇಸ್‍ನವರು ಗಂಭೀರವಾಗಿ ಪರಿಗಣಿಸಿ ಈ ಎಲ್ಲ ಬದಲಾವಣೆಗಳನ್ನು ಇನ್ನು ಕೆಲವೇ ದಿನಗಳಲ್ಲಿ ತರುವುದಾಗಿ ಹೇಳುತ್ತಾ ಉತ್ತರಿಸಿದ್ದಾರೆ.

ಇದೊಂದು ಒಳ್ಳೆಯ ಬೆಳವಣಿಗೆ.
ಗ್ರಾಹಕರ ಬೇಡಿಕೆಗೆ, ಒತ್ತಾಯಕ್ಕೆ ಇರುವ ಶಕ್ತಿಯನ್ನು ಇದು ತೋರಿಸುತ್ತದೆ.

ನೀವು ಕೂಡ ಸಾಧ್ಯವಾದಲ್ಲೆಲ್ಲಾ ಕನ್ನಡದಲ್ಲಿ ಸೇವೆಯನ್ನು ಕೇಳಿ ಪಡೆಯಿರಿ. ಆಗ ಮಾರುಕಟ್ಟೆಯಲ್ಲಿ ಕನ್ನಡಕ್ಕೆ ತಕ್ಕ ಸ್ಥಾನ ಸಿಗುವುದು.

No comments:

Post a Comment